ಮನುಷ್ಯ ದೇಹಕ್ಕೆ ಕಾಡುವ ಪ್ರತಿಯೊಂದು ರೋಗ-ರುಜಿನಾಧಿಗಳಿಗೆ ಪ್ರಕೃತಿಯಿಂದಲೇ ಚಿಕಿತ್ಸೆ ಪಡೆಯುವ ಅವಕಾಶವಿದೆ
ಅದರಲ್ಲೂ ನಮ್ಮ ದೇಶದಲ್ಲಿ ಪ್ರಕೃತಿಯಿಂದ ಸಿಗುವ ಗಿಡಮೂಲಿಕೆಗಳನ್ನೇ ಬಳಸಿಕೊಂಡು ಹಿರಿಯರು ಆರೋಗ್ಯ ಸಮಸ್ಯೆಯನ್ನು ನಿವಾರಿಸಿಕೊಂಡಿದ್ದರು ಎನ್ನುವುದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದಿದೆ
ಇದೇ ರೀತಿಯ ನಂಬಿಕೆಯೊಂದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಪುರಾತನ ಕ್ಷೇತ್ರವಾದ ತೋಡಿಕಾನ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಜನಜನಿತವಾಗಿದೆ
ಸಾವಿರಾರು ವರ್ಷಗಳ ಇತಿಹಾಸವಿರುವ ಈ ಕ್ಷೇತ್ರದ ಪಕ್ಕದಲ್ಲೇ ಹರಿಯುವಂತಹ ಹಳ್ಳವೊಂದರಲ್ಲಿ ಸಾವಿರಾರು ಸಂಖ್ಯೆಯ ಮೀನುಗಳಿದ್ದು, ಈ ಮೀನುಗಳಿಗೆ ಅಕ್ಕಿ ಹಾಗೂ ಹೊದಲು ಹಾಕಿ ಪ್ರಾರ್ಥನೆ ಮಾಡಿಕೊಂಡಲ್ಲಿ ಎಲ್ಲಾ ರೀತಿಯ ಚರ್ಮರೋಗಗಳು ಮಾಯವಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ
ಈ ನಂಬಿಕೆಯ ಹಿನ್ನೆಲೆಯಲ್ಲಿ ಇಲ್ಲಿ ಪೌರಾಣಿಕ ಕಥೆಯೊಂದಿದ್ದು, ಕಣ್ವ ಮಹರ್ಷಿಯು ತೋಡಿಕಾನ ಕ್ಷೇತ್ರದಲ್ಲಿ ಶಿವಲಿಂಗವನ್ನು ಸ್ಥಾಪಿಸಿದರು ಎನ್ನುವ ಐತಿಹ್ಯವಿದೆ
ಕಣ್ವ ಮಹರ್ಷಿಗಳು ತೋಡಿಕಾನದ ಕಾನನದ ನಡುವೆಯೇ ತಮ್ಮ ತಪಸ್ಸನ್ನು ಮಾಡುತ್ತಿದ್ದ ಸಮಯದಲ್ಲಿ ಕ್ಷೇತ್ರದ ಪಕ್ಕದಲ್ಲೇ ಇರುವ ದೇವರಗುಂಡಿ ಎನ್ನುವ ಜಲಪಾತದಿಂದ ಶಿವಲಿಂಗವನ್ನು ತೋಡಿಕಾನ ಕ್ಷೇತ್ರಕ್ಕೆ ತರಲು ನಿರ್ಧರಿಸುತ್ತಾರೆ
ಈ ಸಂದರ್ಭದಲ್ಲಿ ಕಣ್ವ ಮಹರ್ಷಿಗಳು ಶಿವನನ್ನು ಪ್ರಾರ್ಥಿಸಿದಾಗ ಶಿವ ಮಹರ್ಷಿಯ ಮುಂದೆ ಪ್ರತ್ಯಕ್ಷನಾಗುತ್ತಾನೆ
ಶಿವನ ಜೊತೆಗೆ ವಿಷ್ಣುವೂ ಮತ್ಸರೂಪದಲ್ಲಿ ಬಂದು ಮಹರ್ಷಿಯ ಇಚ್ಛೆಯಂತೆ ದೇವರಗುಂಡಿಯಲ್ಲಿ ಮುಳುಗಿ ಜಲಮಾರ್ಗವಾಗಿ ತೋಡಿಕಾನ ಕ್ಷೇತ್ರ ತಲುಪುತ್ತಾರೆ
ಶಿವನು ಮತ್ಸ್ಯ ವಾಹನನಾಗಿ ಕ್ಷೇತ್ರಕ್ಕೆ ಬಂದು ನೆಲೆ ನಿಲ್ಲುತ್ತಾನೆ. ಈ ಸಂದರ್ಭದಲ್ಲಿ ಕಣ್ವ ಮಹರ್ಷಿಗಳು ವಿಷ್ಣುವನ್ನು ಪ್ರಾರ್ಥಿಸಿ ಶಿವನ ಜೊತೆಗೆ ವಿಷ್ಣುವೂ ಕ್ಷೇತ್ರದಲ್ಲಿ ಸಾನಿಧ್ಯ ಪಡೆಯಬೇಕೆಂದು ಇಚ್ಚಿಸುತ್ತಾರೆ
ಈ ಕಾರಣಕ್ಕಾಗಿ ವಿಷ್ಣುವು ಮತ್ಸ್ಯ ರೂಪದಲ್ಲಿ ಇಂದಿಗೂ ಈ ದೇವರಗುಂಡಿ ತೊರೆಯಲ್ಲಿ ನೆಲೆಸಿದ್ದಾನೆ ಎನ್ನುವುದು ಕ್ಷೇತ್ರ ಪುರಾಣವಾಗಿದೆ
ಈ ಕಾರಣಕ್ಕಾಗಿಯೇ ಈ ತೊರೆಯಲ್ಲಿ ಲಕ್ಷಾಂತರ ಸಂಖ್ಯೆಯ ಮೀನುಗಳಿದ್ದು, ಈ ಎಲ್ಲಾ ಮೀನುಗಳು ತೋಡಿಕಾನ ಕ್ಷೇತ್ರದ ಪಕ್ಕದಲ್ಲೇ ನೆಲೆ ನಿಂತಿವೆ
ದೇಹಕ್ಕೆ ಕಾಡುವ ಚರ್ಮರೋಗಾಧಿಗಳ ನಿವಾರಣೆಗೆ ಇಲ್ಲಿಗೆ ಬಂದು ಪ್ರಾರ್ಥಿಸಿಕೊಂಡಲ್ಲಿ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವುದು ಇಲ್ಲಿನ ನಂಬಿಕೆಯಾಗಿದೆ
ಮೀನುಗಳ ಬಳಿ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಲ್ಲಿ ಹಾಗೂ ಹರಕೆ ರೂಪದಲ್ಲಿ ಅಕ್ಕಿ ಹಾಗೂ ಹೊದಲು ಹಾಕುತ್ತೇನೆಂದು ಪ್ರಾರ್ಥಿಸಿಕೊಂಡಲ್ಲಿ ಚರ್ಮರೋಗ ನಿವಾರಣೆಯಾಗುತ್ತದೆ ಎನ್ನುವುದಕ್ಕೆ ಹಲವು ನಿದರ್ಶನಗಳೂ ಇಲ್ಲಿವೆ
ಕೇವಲ ಹಿಂದೂ ಭಕ್ತಾಧಿಗಳಲ್ಲದೆ ಈ ಮೀನುಗಳಿಗೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದವರೂ ಬಂದು ಹರಕೆ ರೂಪದಲ್ಲಿ ಅಕ್ಕಿ ಹಾಗೂ ಹೊದಲು ಹಾಕುತ್ತಿದ್ದಾರೆ
ಅಲ್ಲದೆ ತೋಡಿಕಾನ ದೇವಸ್ಥಾನದಲ್ಲಿ ಬೆಳಿಗ್ಗಿನ ಪೂಜೆಯ ಬಳಿಕ ಅನ್ನ ಪ್ರಸಾದವನ್ನು ಮೊದಲು ಈ ಮೀನುಗಳಿಗೆ ಹಾಕುವ ಸಂಪ್ರದಾಯವನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ
ದೇವರ ಮೀನುಗಳೆಂದೇ ಕರೆಯಲ್ಪಡುವ ಈ ಮೀನುಗಳನ್ನು ಹಿಡಿಯುವುದಾಗಲೀ, ಕೊಲ್ಲುವುದಾಗಲೀ ನಿಷಿದ್ಧವಾಗಿದೆ
ಬೀದರ್ನಲ್ಲಿ ಕಣ್ಮನ ಸೆಳೆಯುವ ಏರ್ ಶೋ, ಏನಿದರ ವಿಶೇಷ?