ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮದವೇರಿದ ಸಲಗ ನಡೆಸಿದ ದಾಳಿಗೆ ಉಸಿರು ನಿಲ್ಲಿಸಿದ ದಸರಾ ಆನೆ ಅರ್ಜುನನ ನೆನಪು ಇನ್ನೂ ಮಾಸಿಲ್ಲ

ಈ ನಡುವೆ ಅರ್ಜುನ ಆನೆಯನ್ನೇ ಹೋಲುವ ಕಾಡಾನೆಯೊಂದು ಕಬಿನಿ ಹಿನ್ನೀರಿನಲ್ಲಿ ಕಂಡು ಬಂದಿದ್ದು, 

ಪ್ರಾಣಿಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ. ಅರ್ಜುನ ಅಭಿಮಾನಿಗಳಂತೂ ಇದು ದಸರಾ ಮಾಜಿ ಕ್ಯಾಪ್ಟನ್‌ ಅರ್ಜುನನ ಪುನರ್ಜನ್ಮ ಎಂದೇ ಕರೆಯತೊಡಗಿದ್ದಾರೆ.

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಸತತ 3 ಬಾರಿ ಚಿನ್ನದ ಅಂಬಾರಿ ಹೊತ್ತು ಲಕ್ಷಾಂತರ ಅಭಿಮಾನಿಗಳನ್ನು ಅರ್ಜುನ ಆನೆ ಪಡೆದಿತ್ತು.

ಅದೇ ಅರ್ಜುನ ಕಳೆದ ಡಿಸೆಂಬರ್‌ನಲ್ಲಿ ಹಾಸನದಲ್ಲಿ ನಡೆದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಮದವೇರಿದ ಆನೆಯೊಂದು ನಡೆಸಿದ ದಾಳಿಗೆ ಒಳಗಾಗಿ ಮೃತಪಟ್ಟಿತ್ತು.

ಕಳೆದ ದಸರಾ ಮಹೋತ್ಸವದಲ್ಲಿ ನಿಶಾನೆ ಆನೆಯಾಗಿ ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಿ, 

ದಾರಿಯುದ್ದಕ್ಕೂ ನೆರೆದಿದ್ದ ಅಪಾರ ಜನಸ್ತೋಮದತ್ತ ಸೊಂಡಿಲು ಎತ್ತಿ ಮನಸೂರೆಗೊಂಡಿದ್ದ ಅರ್ಜುನನ ಅಕಾಲಿಕ ಸಾವು ಪ್ರಾಣಿಪ್ರಿಯರಿಗೆ ನೋವುಂಟು ಮಾಡಿತ್ತು.

ಅರ್ಜುನ ನೆಲೆಸಿದ್ದ ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಬಳ್ಳೆ ಶಿಬಿರ ಸಮೀಪದ ಕಬಿನಿ ಹಿನ್ನೀರಿನ ಪ್ರದೇಶದಲ್ಲಿಯೇ ಈ ಕಾಡಾನೆಯೂ ಪತ್ತೆಯಾಗಿದೆ. 

ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಜ್ಯೂನಿಯರ್ ಅರ್ಜುನ ಕಂಡು ಬಂದಿದ್ದು, ದಸರಾ ಆನೆ ಅರ್ಜುನನ ಪ್ರತಿರೂಪ ಎಂದು ಪ್ರವಾಸಿಗರು ಕಾಡಾನೆಯನ್ನು ಕಣ್ತುಂಬಿಕೊಂಡಿದ್ದಾರೆ.

ಬೇಸಿಗೆ ಹಿನ್ನೆಲೆಯಲ್ಲಿ ಕಬಿನಿ ಹಿನ್ನೀರಿನಲ್ಲಿ ಪ್ರಾಣಿಗಳ ಹಿಂಡು ಬೀಡುಬಿಟ್ಟಿವೆ. 

ಆಹಾರ ಅರಸಿ ವಿವಿಧೆಡೆಯಿಂದ ಬರುವ ಆನೆಗಳು ಹಿನ್ನೀರಿನ ಪ್ರದೇಶದಲ್ಲಿ ಓಡಾಡುತ್ತಿವೆ. 

ಆನೆಗಳ ಹಿಂಡಲ್ಲಿ ‘ಜೂನಿಯರ್ ಅರ್ಜುನʼ ಆನೆಯೂ ಒಂದಾಗಿದ್ದು, ಸಫಾರಿಗೆ ತೆರಳಿದ್ದ ಪ್ರವಾಸಿಗರಿಗಂತೂ ಭಾರಿ ಆಶ್ಚರ್ಯ ಉಂಟು ಮಾಡಿದೆ.

Belagavi News: ಅಗ್ರಣಿ ನದಿಗೆ ಬಿಟ್ಟ ನೀರಿನಿಂದ ಬೆಳಗಾವಿ ಗಡಿ ಮಂದಿಗೆ ಸಹಾಯ!