ಮಂಗಳೂರಿನ ಪಿಲಿಕುಳದ ಹೆಂಚು ಹೊದೆಸಿದ್ದ ದೊಡ್ಡದಾದ ಆ ಮನೆಯನ್ನು ಹೊರಗಿನಿಂದ ನೋಡಿದರೆ ಅಬ್ಬಾ ಅದೆಷ್ಟು ದೊಡ್ಡ ಮನೆ ಎಂದು ಎನಿಸದೇ ಇರದು
ಮೆಟ್ಟಿಲುಗಳನ್ನು ಹತ್ತಿ ಒಳಹೊಕ್ಕರೆ ಅಲ್ಲಿ ಅದ್ಭುತ ಪ್ರಪಂಚವೇ ತೆರೆದುಕೊಳ್ಳುತ್ತದೆ. ನಮ್ಮ ಮನಸ್ಸು ತಾತ, ಮುತ್ತಾತರ ಕಾಲಕ್ಕೆ ಕೊಂಡು ಹೋಗುತ್ತದೆ
ತುಳುನಾಡಿನ ಗತವೈಭವವನ್ನು ಸಾರುವ ನಾಲ್ಕು ಸೂತ್ರದ ಬೃಹತ್ ಗುತ್ತಿನ ಮನೆ ಇದು. ದಕ್ಷಿಣ ಕನ್ನಡದ ಶ್ರೀಮಂತ ಪರಂಪರೆಯೇ ಅನಾವರಣಗೊಳ್ಳುವ ಈ ಮನೆ ಪಿಲಿಕುಳದ ಗುತ್ತಿನ ಮನೆ. ಈ ಗುತ್ತಿನ ಮನೆಗಳು ಗತವೈಭವದ ಪ್ರತೀಕವಾಗಿದೆ
ದೊಡ್ಡದಾದ ನಾಲ್ಕು ಸೂತ್ರದ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ದೊಡ್ಡ ಹಜಾರ, ಲಾಟೀನಿನ ದೀಪ, ಒಳಗಿನ ಒಂದು ದೊಡ್ಡ ಹಾಲ್ನಲ್ಲಿ ಅಜ್ಜಿ ಮೊಮ್ಮಕ್ಕಳಿಗೆ ಕಥೆ ಹೇಳುವ ವಿನ್ಯಾಸದ ಮಾದರಿ, ಅದರ ಬೆನ್ನಲ್ಲೇ ಕೇಳಿ ಬರುವ ರೆಕಾರ್ಡೆಡ್ ಅಜ್ಜಿ ಕಥೆ ಮಕ್ಕಳನ್ನು ರಂಜಿಸುತ್ತದೆ
ದಕ್ಷಿಣ ಕನ್ನಡದ ದೈವಾರಾಧನೆಯ ಪ್ರತೀಕದಂತಿರುವ ಭೂತದ ಪರಿಕರಗಳು, ಯಕ್ಷಗಾನದ ಚೌಕಿ, ಹಳೆಯ ಕಾಲದ ಅಡುಗೆ ಮನೆಯ ಪ್ರತಿರೂಪ ಎಲ್ಲವೂ ಇಂದಿನ ಮಕ್ಕಳಿಗೆ ಉತ್ತಮ ಮಾಹಿತಿ ನೀಡುತ್ತವೆ
ಮಂಗಳೂರಿನ ವಾಮಂಜೂರು ಸಮೀಪದ ಪಿಲಿಕುಳದಲ್ಲಿರುವ ಶಿವರಾಮ ಕಾರಂತ ನಿಸರ್ಗ ಧಾಮದಲ್ಲಿ ಇರುವ ಈ ಗುತ್ತಿನ ಮನೆ ಪ್ರವಾಸಿಗರನ್ನು ಗತ್ತಿನಿಂದ ಕರೆಯುತ್ತದೆ
ಈ ಗುತ್ತಿನ ಮನೆಯಲ್ಲಿ ತುಳುನಾಡಿನಲ್ಲಿ ಹಿಂದೆ ಬಳಸುತ್ತಿದ್ದ ಅಡುಗೆ ಪರಿಕರಗಳಿವೆ, ಹಿಟ್ಟು ರುಬ್ಬುವ ಕಲ್ಲುಗಳಿವೆ, ಮರದ ಆಕರ್ಷಕವಾದ ಅತೀ ಪುರಾತನವಾದ ಆಸೀನಗಳಿವೆ, ಮರದ ಕೆತ್ತನೆಗಳುಳ್ಳ ಕಂಬ, ದೈವದ ಕೋಣೆ, ಕುಟುಂಬದ ಕೋಣೆ, ಅಡುಗೆ ಕೋಣೆಗಳೆಲ್ಲಾವೂ ತುಳುನಾಡಿನ ವೈಭವನ್ನು ಸಾರುತ್ತದೆ
ಯಕ್ಷಗಾನದ ಚೌಕಿ ನಿಜ ಚೌಕಿಯ ದರ್ಶನ ಮಾಡಿಸುತ್ತದೆ. ಅಲ್ಲದೇ ಕಂಗೀಲು, ಕುಡುಬಿ, ಆಟಿಕಳೆಂಜನ ಪ್ರತಿಕೃತಿ ಪಾಡ್ದನದೊಂದಿಗೆ ಮಾಹಿತಿ ನೀಡುತ್ತದೆ. ಮನೆಯಲ್ಲಿ ನಿರಂತರವಾಗಿ ಶುಚಿಗೊಳಿಸುವ ಸಿಬ್ಬಂದಿ ಇದ್ದಾರೆ. ಮಾಹಿತಿ ನೀಡಲು ಸಿಬ್ಬಂದಿ ಗಳು ಲಭ್ಯವಿದ್ದಾರೆ
ತುಳುನಾಡಿನ ಗುತ್ತಿನ ಮನೆಗಳ ವೈಭವವನ್ನು ಕಾಣಬೇಕಾದರೆ ನೀವೂ ಒಮ್ಮೆ ಮಂಗಳೂರು ನಗರದ ಹೊರವಲಯದಲ್ಲಿರುವ ಈ ಪಿಲಿಕುಳದ ಗುತ್ತಿನ ಮನೆಗೊಮ್ಮೆ ನಿಗದಿತ ಶುಲ್ಕವನ್ನು ನೀಡಿ ಭೇಟಿ ಮಾಡಬಹುದಾಗಿದೆ
Basaveshwara Swamy Karnika: "ನರಲೋಕದ ಜನಕೆ ದೃಷ್ಟಿ ಹುಚ್ಚಾದೀತಲೇ ಪರಾಕ್" ಈ ವರ್ಷದ ಬಸವೇಶ್ವರ ಸ್ವಾಮಿ ಕಾರ್ಣಿಕದ ಅರ್ಥವೇನು?